ವಾಯುನಿಕ್ಷೇಪಗಳು
	ಬೀಸುಗಾಳಿಯ ಪರಿಣಾಮವಾಗಿ ನೆಲದ ಮೇಲೆ ಏಳುವ ದೂಳು ಮತ್ತು ಮರಳಿನ ಸೂಕ್ಷ್ಮಕಣಗಳ ಸಂಗ್ರಹ (ಇಯೋಲಿಯನ್ ಡಿಪಾಸಿಟ್ಸ್). ಹರಿವ ನೀರು ಮತ್ತು ಬೀಸುಗಾಳಿಯ ಪರಿಣಾಮವಾಗಿ ಭೂಮಿಯ ಮೇಲ್ಮೈ ಸವೆತಕ್ಕೆ ಈಡಾಗುತ್ತದೆ. ನಾಲ್ಕಾರು ವರ್ಷಗಳಿಗೊಮ್ಮೆ ಮಳೆ ಬೀಳುವ ಮರುಭೂಮಿ ಪ್ರದೇಶಗಳಲ್ಲಿ ಭೂಸವೆತ ಆಗುವುದು ಬೀಸುಗಾಳಿಯಿಂದಲೇ. ಭೂಮಿಯ ಶುಷ್ಕ ಪ್ರದೇಶಗಳ ಪೈಕಿ ಬಹುತೇಕ ಭಾಗ ಉಷ್ಣವಲಯದಲ್ಲಿದೆ. ಅದರಲ್ಲೂ ಅಟ್ಲಾಂಟಿಕ್ ಸಾಗರ ತೀರದಿಂದ ಇರಾನ್ ಖಾರಿಯವರೆಗಿನ ಪ್ರದೇಶ, ಉತ್ತರ ಆಫ್ರಿಕ ಮತ್ತು ಪಶ್ಚಿಮ ಏಷ್ಯ ಖಂಡಗಳಲ್ಲಿ ಹಬ್ಬಿರುವ ಸಹಾರ ಮೊದಲಾದ ವಿಶಾಲ ಮರುಭೂಮಿಗಳು ಭೂಮಿಯಲ್ಲೇ ಹಿರಿಯ ಉಷ್ಣಮರುಭೂಮಿಗಳು. 

	ಮರುಭೂಮಿ ಕೇವಲ ಮರಳ ರಾಶಿಯ ವಿಸ್ತಾರ ಹರವು ಅಲ್ಲ; ಅಲ್ಲಿ ಬೋಳು ಬಂಡೆ ಮತ್ತು ನುರುಜು ಕಲ್ಲುಗಳೂ ಕೊರಕಲು ಮತ್ತು ತಗ್ಗು ನೆಲಗಳೂ ಇವೆ. ಜಲ ಮತ್ತು ಸಸ್ಯಾಭಾವ ಮರುಭೂಮಿಯ ಪ್ರಧಾನಲಕ್ಷಣ. ಅಧಿಕ ಉಷ್ಣತೆ ಮತ್ತು ಅತ್ಯಲ್ಪ ಮಳೆಗಳಿಂದ ಮರುಭೂಮಿಯ ನೆಲ ಒಂದಾಗಿ ಬಿರುಸಾಗಿರುತ್ತದೆ. ಅದರ ಮೇಲೆ ವೇಗದಿಂದ ಬೀಸುವ ತೇವರಹಿತ ಗಾಳಿ ಅಲ್ಲಿಯ ಪ್ರದೇಶವನ್ನೆಲ್ಲ ಶೋಷಿಸುತ್ತದೆ. ಆದ್ದರಿಂದ ಅಲ್ಲಿ ಶುಷ್ಕ ಹವೆಯ ಎದುರು ಉಳಿಯಬಲ್ಲ ಕೆಲವೇ ಜಾತಿಯ ಸಸ್ಯಗಳು ಮಾತ್ರ ಇರುವುದು ಸಾಧ್ಯ. ಉಷ್ಣತೆಯ ಪರಿಣಾಮವೂ ಅಧಿಕ. ಅಲ್ಲಿಯ ಬಂಡೆಗಳ ಮೇಲೆ ಸೂರ್ಯಕಿರಣಗಳು ತೀಕ್ಷ್ಣವಾಗಿ ಬೀಳುವುವು; ಹಗಲು ಇರುಳುಗಳ ಉಷ್ಣತೆಗಳಲ್ಲಿ ಬಹಳ ಅಂತರವಿದೆ. ಈ ಕಾರಣದಿಂದ ಹಗಲಿನ ವೇಳೆ ಬಂಡೆಗಳ ಹೊರಮೈ ಉಷ್ಣತೆ ಏರಿ ಅವು ಹಿಗ್ಗುತ್ತವೆ. ಇರುಳಿನ ತಂಪುಹವೆಯಲ್ಲಿ ಬಂಡೆಗಳು ಕುಗ್ಗಿ ಬಿರುಕು ಬಿಡುತ್ತವೆ. ಕ್ರಮೇಣ ಈ ಬಿರುಕು ಮತ್ತಷ್ಟು ದೊಡ್ಡದಾಗಿ ಬಂಡೆ ಒಡೆದು ಚೂರಾಗಿ ದೊರಗುಹರಳು ಮತ್ತು ಕಣಗಳಾಗುತ್ತವೆ. ಅವ್ಯಾಹತವಾಗಿ ಬೀಸುವ ಗಾಳಿಯಿಂದ ಇವು ಪರಸ್ಪರ ತಿಕ್ಕಲ್ಪಟ್ಟು ಮರಳಿನ ಚಿಕ್ಕ ಹಾಗೂ ನಯ ಕಣಗಳಾಗಿ ಮಾರ್ಪಡುತ್ತವೆ. ಕೆಲವೊಮ್ಮೆ ಬಂಡೆಗಳ ಹೊರಮೈ ಪೊರೆ ಪೊರೆಗಳಾಗಿ ಉದುರಿ ಈ ಕಣಗಳು ಚಿಕ್ಕದಾಗುತ್ತ ಹೋಗುವುವು. ಇವೆಲ್ಲ ವಾಯುನಿಕ್ಷೇಪಗಳಿಗೆ ಎಡೆ ಮಾಡಿಕೊಡುತ್ತವೆ. 

	ಬೀಸುಗಾಳಿಯ ಹೊರೆ ಎರಡು ರೀತಿಯದು: 1. ದೊಡ್ಡ ಮರಳಿನ ಹರಳುಗಳು ಮತ್ತು ಚಿಕ್ಕ ಶಿಲಾಕಳಪೆಗಳಿಂದ ಕೂಡಿದ ಮರುಭೂಮಿಯ ತಳದ ಹೊರೆ. ನೆಲದ ಮೇಲಿನ ದೂಳುಮರುಳು ಮತ್ತು ಮಣ್ಣನ್ನು ಗಾಳಿ ತಳದಲ್ಲೇ ಕಸಗುಡಿಸುವಂತೆ ಝಾಡಿಸಿ, ಉರುಳಿಸಿಕೊಂಡು ಮುಂದಕ್ಕೆ ಒಯ್ದು ರಾಶಿಗೂಡಿಸುತ್ತದೆ. 2. ಗಾಳಿಯಲ್ಲಿ ತೇಲಾಡುವಷ್ಟು ಹಗುರವೂ ನಯವೂ ಆದ ಮರಳಿನ ಕಣಗಳು ಮತ್ತು ದೂಳು. ಗಾಳಿ ಇಂಥ ಕಣಗಳ ರಾಶಿಯನ್ನು ದೂಳಿನಂತೆ ಎತ್ತರಕ್ಕೂ ಹಾರಿಸುವಾಗ ಅದು ತನ್ನ ಹೊಸಹೊರೆಯ ಸಹಾಯದಿಂದ ಅಲ್ಲಿರಬಹುದಾದ ಶಿಲೆಗಳನ್ನು ಉಜ್ಜಿ ಸವೆಯಿಸುತ್ತದೆ; ಬೆಟ್ಟಭಾಗಗಳನ್ನು ಕೊರೆಯುತ್ತದೆ; ಚೂರುಗಲ್ಲುಗಳನ್ನು ಸವೆಯಿಸಿ ಚಿಕ್ಕ ಚಿಕ್ಕ ಗೋರಿಗಳಾಗಿ ಮಾಡುತ್ತದೆ. ಹೀಗೆ ಕಣಗಳ ರಾಶಿಯನ್ನು ಹೊತ್ತುಕೊಂಡು ಬೀಸುವ ಗಾಳಿ ತನಗೆ ಎದುರಾಗುವ ಪ್ರತಿಯೊಂದು ಬಂಡೆಯ ಹೊರಮೈಯ್ಯನ್ನೂ ದೊರಗು ಕಾಗದದಂತೆ ತಿದ್ದಿ ತೇಯುತ್ತದೆ. ಇಂಥ ವಿನಾಶಕಕೃತ್ಯದ ಪರಿಣಾಮ ಗಳನ್ನು ಕೈರೋ ನಗರದ ಸಮೀಪ ಇರುವ ಪಿರಮಿಡ್ ಮತ್ತು ಇತರ ಪ್ರಾಚೀನ ಸ್ಮಾರಕಗಳಲ್ಲಿ ಕಾಣಬಹುದು. ಗಾಳಿ ಹೊತ್ತುತಂದ ಮರಳು ಮತ್ತು ದೂಳಿನ ಕಣಗಳು ಮರುಭೂಮಿಯ ಕೊರಕಲು ಮತ್ತು ದೊಡ್ಡ ಬಂಡೆಗಳ ಅಡಿಯಲ್ಲಿ ಶೇಖರವಾಗುತ್ತವೆ. ಗಾಳಿ ಬೀಸುವ ವಿರುದ್ಧ ದಿಕ್ಕಿನಲ್ಲಿ ತೇವವಿರುವ ಭಾಗದಲ್ಲಿ ಬೆಳೆದ ಹುಲ್ಲು ಈ ಮರಳಿನ ಕಣಗಳನ್ನು ತಡೆಹಿಡಿದು ರಾಶಿ ಉಂಟಾಗಲು ಸಹಾಯ ಮಾಡುತ್ತದೆ. ಅತ್ಯಧಿಕ ವೇಗ ಹಾಗೂ ಶಕ್ತಿಗಳಿಂದ ಮರುಭೂಮಿಯಲ್ಲಿ ಬೀಸುವ ಗಾಳಿಯ ಸಲುವಾಗಿ ಆಗಾಗ ದೂಳಿನಿಂದ ಕೂಡಿದ ಸುಳಿಗಾಳಿ ಕೂಡ ಏಳುತ್ತದೆ. ಗಾಳಿಯೊಂದಿಗಿನ ದೂಳು ಮತ್ತು ಮರಳಿನ ಸೂಕ್ಷ್ಮಕಣಗಳು ದೊಡ್ಡ ಮೋಡ ಕವಿದಂತೆ ಆಕಾಶವನ್ನು ಮುಸುಕುತ್ತವೆ. ಸುಳಿಗಾಳಿಗಳು ಸಾವಿರಾರು ಟನ್ನುಗಳಷ್ಟು ದೂಳಿನ ಕಣಗಳ ಅಪಾರ ರಾಶಿಯನ್ನು ಮರುಭೂಮಿಯ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುತ್ತವೆ. ಉದಾಹರಣೆಗೆ ಸಹಾರದಿಂದ ಎದ್ದ ದೂಳು ಕೂಡಿದ ಸುಳಿಗಾಳಿ ಉತ್ತರಕ್ಕೆ ಬೀಸಿ ಇಟಲಿಯ ವಾತಾವರಣದಲ್ಲಿ ಹರಡಿ ಕೊಳ್ಳುವುದು. ಅದರಲ್ಲಿಯ ಕೆಂಪುದೂಳಿನ ಕಣಗಳು ಅಲ್ಲಿ ಬೀಳುವ ಮಳೆಯ ಹನಿಗಳೊಂದಿಗೆ ಕೂಡಿಕೊಂಡು ಕೆಂಪುಬಣ್ಣದ ಮಳೆಗೆ ಕಾರಣವಾಗುತ್ತವೆ. ಕೆಲವೊಮ್ಮೆ ಮರುಭೂಮಿಗಳಲ್ಲಿ ಮರಳಿನ ಸುರುಳಿಗಳು (ಕೊಳವೆ) ಮುಗಿಲೆತ್ತರಕ್ಕೆ ಎದ್ದು ಸಾಗರ ಮಧ್ಯದ ನೀರಿನ ಸುಳಿಗಂಬಗಳಂತೆ ಚಲಿಸುತ್ತಿರುವುದನ್ನು ಕಾಣಬಹುದು. ಒಮ್ಮೊಮ್ಮೆ ಇಂಥ ಇಪ್ಪತ್ತು ಮೂವತ್ತು ಮರಳಿನ ಸುಳಿಗಂಬಗಳು ಒಂದೇ ದಿಕ್ಕಿನಲ್ಲಿ ಚಲಿಸುವುದೂ ಉಂಟು. ಪಶ್ಚಿಮ ಆಫ್ರಿಕದ ಮರುಭೂಮಿಯ ವಾಯುನಿಕ್ಷೇಪಗಳು ಅಧಿಕ ಪ್ರಮಾಣದಲ್ಲಿ ಸಮುದ್ರಕ್ಕೆ ಎಸೆಯಲ್ಪಟ್ಟು ಅಲ್ಲೇ ಸಂಗ್ರಹವಾಗುತ್ತವೆ. 

	ವಾಯುನಿಕ್ಷೇಪಗಳು ಮತ್ತು ಪವನಕ್ರಿಯೆಗಳಿಂದ ಉಂಟಾದ ವಿಶಿಷ್ಟ ಲಕ್ಷಣಗಳುಳ್ಳ, ಕೆಲವು ಮರುಭೂಮಿಯ ದೃಶ್ಯಗಳು ಇವು: 1. ನೆಲದ ಮೇಲಿನ ದೂಳೆಲ್ಲ ಹಾರಿಹೋಗಿ ಒಳಗಿನ ಕಠಿಣಶಿಲೆಗಳು ಮೇಲೆದ್ದು ಕಾಣುವ ಹಮ್ಮಡಾ ದೃಶ್ಯ. ಇದು ಸಹಾರ ಮರುಭೂಮಿಯಲ್ಲಿ ಸಾಮಾನ್ಯ. 2. ಮರಳಿನ ಮತ್ತು ಚೂರುಗಲ್ಲುಗಳು ಬೇರೆ ಬೇರೆಯಾಗಿ ಶೇಖರ ವಾಗಿರುವ ರೆಗ್ ಮತ್ತು ಸೇಂರ್ ದೃಶ್ಯ. ಇಂಥವು ಅನುಕ್ರಮವಾಗಿ ಸಹಾರ ಮತ್ತು ಲಿಬಯ, ಈಜಿಪ್ಟ್ ಮರುಭೂಮಿಗಳಲ್ಲಿ ಕಾಣುತ್ತವೆ. 3. ಗಾಳಿಯಿಂದ ಒಯ್ಯಲ್ಪಟ್ಟ ಮರಳಿನ ಕಣಗಳು ಅನೇಕ ದಿಣ್ಣೆಗಳಾಗಿ ರಾಶಿಗೊಂಡು ಸ್ಥಾನಾಂತರಗೊಳ್ಳುತ್ತ ಹೋಗುವ ಎರ್ಗ್ ದೃಶ್ಯ. ಇದನ್ನು ಸಹಾರದಲ್ಲಿ ಕಾಣಬಹುದು.		
						
	(ಎಮ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ